ರಸ್ತೆ ಅಪಘಾತದಲ್ಲಿ IAS ಅಧಿಕಾರಿ ಮಹಾಂತೇಶ ಬೀಳಗಿ ಸಾವು!, ಕಲಬುರಗಿಯ ಜೇವರ್ಗಿ ಬಳಿ ಘಟನೆ

ಕಲಬುರಗಿ: ಬೆಸ್ಕಾಂ ಎಮ್‌ಡಿ ಮಹಾಂತೇಶ್ ಬೀಳಗಿ ಅವರು ಭೀಕರ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದಾಗ ಜೇವರ್ಗಿ ತಾಲೂಕಿನ ಗೌನಹಳ್ಳಿ ಬಳಿ ಅವರ ಇನ್ನೋವಾ ಕಾರು ಅಪಘಾತಕ್ಕೀಡಾಗಿದೆ. ದುರ್ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿ ಅವರನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಕಾರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 51 ವರ್ಷದ ಬೀಳಗಿ ಅವರು ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಮಂಗಳವಾರ ಸಂಜೆ ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ತಾಲೂಕಿನ ಗೌನಹಳ್ಳಿ ಬಳಿ ಇನ್ನೋವಾ ಕಾರ್ ಅಪಘಾತಕ್ಕೆ ಈಡಾಗಿದೆ. ಸ್ಥಳದಲ್ಲಿಯೇ ಜತೆಗಿದ್ದ ಇಬ್ಬರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಹಾಂತೇಶ್ ಬಿಳಗಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಗಿತ್ತು.
ತೀವ್ರ ಗಾಯಗಳಾದ ಹಿನ್ನೆಲೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ಆಸ್ಪತ್ರೆಗೆ ಕಲಬುರಗಿ ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಡಿಎಚ್‌ಒ ಶರಣಬಸಪ್ಪ ಕ್ಯಾತನಾಳ್ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿದ್ದಾರೆ.
ವ್ಯಕ್ತಿತ್ವ, ಆಡಳಿತದಿಂದಲೇ ಬೀಳಗಿ ಹೆಸರು ವಾಸಿ
ದಾವಣಗೆರೆಯ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಅವರು, ಬಡವರನ್ನು ಕಂಡರೆ ಮನತುಂಬಿ ಬರುತ್ತಿತ್ತು. ವಿದ್ಯಾರ್ಥಿಗಳಿಗೆ ಸಮಯ ಸಿಕ್ಕಾಗೆಲ್ಲಾ ಪ್ರೋತ್ಸಾಹ ಕೊಡುವುದನ್ನು ತಪ್ಪಿಸುತ್ತಿರಲಿಲ್ಲ. ಜ್ಞಾನ ಬೆಳೆಸಿಕೊಳ್ಳಿ ಅಂತ ಎಲ್ಲರಿಗೂ ಸಲಹೆ ಮಾಡುತ್ತಿದ್ದರು. ಕಷ್ಟದ ಬದುಕಿನಲ್ಲೂ ಶ್ರಮದಿಂದ ಓದಿ ಉನ್ನತ ಹುದ್ದೆಗೆ ಏರಿದ ಮಹಾಂತೇಶ ಬೀಳಗಿ ಅವರು ತಮ್ಮ ಕೆಲಸಗಳಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಜನಸ್ನೇಹಿ ಅಧಿಕಾರಿಯಾಗಿ, ಭಾವುಕ ವ್ಯಕ್ತಿಯಾಗಿ ಮಹಾಂತೇಶ ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ‘ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ವಾಪಸ್‌ ಕೊಡಬೇಕು,’ ಅನ್ನೋದು ಅವರು ಅನುಸರಿಸುತ್ತಿದ್ದ ತತ್ವಗಳಲ್ಲಿ ಒಂದಾಗಿತ್ತು.

ಬೆಸ್ಕಾಂ ಬಳಿಕ ಖನಿಜ ನಿಗಮದ ಎಂಡಿ
2012 ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿಯಾಗಿದ್ದ ಬೀಳಗಿಯವರು ಹಲವು ಜಿಲ್ಲೆಗಳ ಸಿಇಒ, ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗಾವಣೆಗೊಂಡು ಬೆಸ್ಕಾಂ ಎಂಡಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಇತ್ತೀಚೆಗೆ ಅಲ್ಲಿಂದಲೂ ವರ್ಗಾವಣೆಯಾಗಿದೆ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ಹೈಲೈಟ್ಸ್‌:
ಕರ್ನಾಟಕದ ಜನಸ್ನೇಹಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅಪಘಾತದಲ್ಲಿ ಸಾವು.
ವಿಜಯಪುರದಿಂದ ಕಲಬುರಗಿಗೆ ಆಗಮಿಸುತ್ತಿದ್ದ ವೇಳೆ ಜೇವರ್ಗಿ ತಾಲೂಕಿನ ಗೌನಹಳ್ಳಿ ಬಳಿ ಅಪಘಾತ.
51 ವರ್ಷದ ಬೀಳಗಿ ಅವರು ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.